ದೇವರಾಷ್ಟ್ರ -
ಗುಪ್ತ ಸಮ್ರಾಟ ಸಮುದ್ರಗುಪ್ತನ (345-380) ಅಲಹಾಬಾದ್ ಸ್ತಂಭಶಾಸನದಲ್ಲಿ ಈ ಹೆಸರಿನ ಉಲ್ಲೇಖವಿದೆ. ಸಮುದ್ರಗುಪ್ತ ಸೋಲಿಸಿದ ದಕ್ಷಿಣಾಪಥದ ಅರಸರಲ್ಲೊಬ್ಬನಾದ ಕುಬೇರ ಇದರ ದೊರೆಯಾಗಿದ್ದನೆಂಬುದು ಆ ಶಾಸನದಿಂದ ತಿಳಿದುಬರುತ್ತದೆ. ಶಾಸನದ ಆ ಭಾಗ ಹೀಗಿದೆ : 

ಕೌಸಲಕ ಮಹೇಂದ್ರ ಮಹಾಕಾಂತಾರಕ ವ್ಯಾಘ್ರರಾಜ ಕೌರಾಳಕ ಮಂಟರಾಜ ಪೈಷ್ಠಪುರಕ ಮಹೇಂದ್ರಗಿರಿ ಕೌಟ್ಟೂರಕ ಸ್ವಾಮಿದತ್ತೆ ರಂಡಪಲ್ಲಕ ದಮನ ಕಾಂಚೇಯಕ ವಿಷ್ಣುಗೋಪಾವಮುಕ್ತಕ ನೀಲರಾಜ ವೈಂಗೇಯಕ ಹಸ್ತಿವರ್ಮ ಪಾಲಕ್ಕೋಗ್ರಸೇನ ದೇವರಾಷ್ಟ್ರಕ ಕುಬೇರ ಕೌಸ್ಥಲಪುರಕ ಧನುಂಜಯ ಪ್ರಭೃತಿ 
ಸರ್ವದಕ್ಷಿಣಾಪಥರಾಜಾಗ್ರಹಣಮೋಕ್ಷಾನುಗ್ರಹ ಜನಿತ ಪ್ರತಾಪೋನ್ಮಿಶ್ರ ಮಹಾ ಭಾಗ್ಯಸ್ಯ.

ಇಲ್ಲಿ ದೇವರಾಷ್ಟ್ರ ಎಂಬುದು ಮಹಾರಾಷ್ಟ್ರವನ್ನು ಸೂಚಿಸುತ್ತದೆಂದು ಹಿಂದೆ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಈ ಅಭಿಪ್ರಾಯದ ಆಧಾರದ ಮೇಲೆ ಸಮುದ್ರಗುಪ್ತ ಇಡೀ ದಕ್ಷಿಣಾಭಾರತ ಹಾಗೂ ಮಹಾರಾಷ್ಟ್ರಗಳಲ್ಲಿ ದಿಗ್ವಿಜಯ ಸಾಧಿಸಿದ್ದನೆಂದು ಭಾವಿಸಲಾಗಿತ್ತು. ಆದರೆ ಫ್ರೆಂಚ್ ವಿದ್ವಾಂಸ ಡ್ಯೂಟ್ರಲ್ ಮತ್ತು ಇತರ ಕೆಲವು ವಿದ್ವಾಂಸರ ಅಭಿಪ್ರಾಯ ಭಿನ್ನವಾದ್ದು. ದಕ್ಷಿಣ ಭಾರತದ ಪೂರ್ವ ಕರಾವಳಿ ಹಾಗೂ ಮಧ್ಯ ಪ್ರದೇಶದ ಪೂರ್ವ ಭಾಗಕ್ಕೆ ಮಾತ್ರ ಸಮುದ್ರಗುಪ್ತನ ದಿಗ್ವಿಜಯ ಸೀಮಿತವಾಗಿತ್ತು ಎಂಬುದು ಇವರ ಅಭಿಪ್ರಾಯ. ಪಶ್ಚಿಮ ಕರಾವಳಿ, ಒಳನಾಡು ಹಾಗೂ ಮಹಾರಾಷ್ಟ್ರಗಳು ಸಮುದ್ರಗುಪ್ತನ ದಿಗ್ವಿಜಯ ಪಥದಿಂದ ಹೊರಗೆ ಉಳಿದಿದ್ದುವೆಂದು ಇವರು ಹೇಳುತ್ತಾರೆ. ಹೆಚ್ಚಿನ ವಿದ್ವಾಂಸರು ಈ ಅಭಿಪ್ರಾಯವನ್ನೊಪ್ಪಿ, ಈಗಿನ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಎಲ್ಲಮಂಜಿಲ್ಲ ತಾಲ್ಲೂಕಿನಲ್ಲಿರುವ ದೇವರಾಷ್ಟ್ರ ಎಂಬ ಹೆಸರಿನ ಗ್ರಾಮವೇ ಶಾಸನೋಕ್ತ ದೇವರಾಷ್ಟ್ರವೆಂದು ಗುರುತಿಸಿದ್ದಾರೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ